ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ಪ್ರಮುಖ ಅಂಶಗಳು,
ಸ್ಥಳ: ಕಮಲ್ ಮಹಲ್ , ಹೊಟೇಲ್ ಐಟಿಸಿ ಮೌರ್ಯ, ನವ ದೆಹಲಿ.
ಎಲ್ಲರಿಗೂ ನಮಸ್ಕಾರ,
1. ‘ಬ್ರಿಡ್ಜ್ ಟು ಬೆಂಗಳೂರು’ ವಿಶೇಷ ಕಾರ್ಯಕ್ರಮಕ್ಕೆ ತಮ್ಮನ್ನೆಲ್ಲಾ ಸ್ವಾಗತಿಸುವುದು ನನಗೆ ದೊರೆತ ಗೌರವ ಎಂದು ನಾನು ಭಾವಿಸಿದ್ದೇನೆ.
2. ಕರ್ನಾಟಕ ಮತ್ತು ವಿಶ್ವದೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ನಾವೆಲ್ಲಾ ಇಲ್ಲಿ ಸೇರಿದ್ದೇವೆ. ಈ ಮಾತುಕತೆಯು ಕೇವಲ ತಂತ್ರಜ್ಞಾನಕ್ಕೆ ಮಾತ್ರ ಸೀಮತವಾಗಿರದೇ ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ, ಸುಸ್ಥಿರತೆ ಮತ್ತು ನಾವೀನ್ಯತೆಯಲ್ಲಿ ಶಾಶ್ವತ ಪಾಲುದಾರಿಕೆಗಳನ್ನು ಸೃಷ್ಠಿಸುವ ಬಗ್ಗೆಯೂ ಚರ್ಚಿಸಲಿದೆ. ಕರ್ನಾಟಕ ವಿನಿಮಯದ ಹೃದಯ ಭಾಗವಾಗಿದ್ದು ನಮ್ಮ ದೃಷ್ಠಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತಸವಾಗಿದೆ.
3. ಬೆಂಗಳೂರು ಟೆಕ್ ಸಮ್ಮಿಟ್ 2025 ಗೆ ಇಂದಿನ ಕಾರ್ಯಕ್ರಮ ಮುನ್ನಡಿಯಾಗಿದೆ. ಇದು ನಾವೀನ್ಯತೆಗೆ ಏಷ್ಯಾದಲ್ಲಿಯೇ ಮುಂಚೂಣಿಯಲ್ಲಿರುವ ವೇದಿಕೆ. ಅದಕ್ಕೂ ಮಿಗಿಲಾಗಿ ಸಂಪರ್ಕ, ಸಹಯೋಗ ಮತ್ತು ಹಂಚಿಕೊಳ್ಳಬಹುದಾದ ಭವಿಷ್ಯವನ್ನು ರೂಪಿಸಲು ಇದೊಂದು ಸದವಕಾಶ. ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ಧಕ್ಕಾಗಿ ಕರ್ನಾಟಕ ಸರ್ಕಾರದ ಎಲೆಕ್ರಟಾನಿಕ್ಸ್, ಐಟಿ, / ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ನಾನು ಅಭಿನಂದಿಸುತ್ತೇನೆ.
4. ಕರ್ನಾಟಕವು ಸಂಪ್ರದಾಯ ಮತ್ತು ಪ್ರಗತಿಯು ಸಂಧಿಸುವ ಸ್ಥಳ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಹಂಪಿ ಮತ್ತು ಪಟ್ಟದಕಲ್ಲಿನ ಪುರಾತನ ಅವಶೇಷಗಳು ನಮ್ಮ ಶ್ರೀಮಂತ ಇತಿಹಾಸವನ್ನು ಸಾರುತ್ತವೆ. ಕರ್ನಾಟಕ ಸಂಗೀತ ಮತ್ತು ಯಕ್ಷಗಾನದ ಮಾಧುರ್ಯದ ಮೂಲಕವೂ ನಮ್ಮ ಚರಿತ್ರೆ ಪ್ರತಿಫಲಿಸುತ್ತದೆ.
5. ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿರುವ ನಮ್ಮ ಕನ್ನಡ ಭಾಷೆ, ಕವಿ ಪಂಪನ ಜಾಣ್ಮೆ ಹಾಗೂ ಬಸವಣ್ಣನಂತಹ ತತ್ವಜ್ಞಾನಿಗಳ ಆದರ್ಶಗಳನ್ನು ಹೊತ್ತಿದೆ. ಶ್ರವಣಬೆಳಗೋಳದ ಪವಿತ್ರ ನೆಲೆದಿಂದ ಕೂಡಲಸಂಗಮದ ಜೀವತುಂಬಿದ ಸಂಪ್ರದಾಯಗಳವರೆಗೆ ಕರ್ನಾಟಕ ರಾಜ್ಯ ಅನ್ವೇಷಿಸಲು ಕಾಯುತ್ತಿರುವ ಸಾಂಸ್ಕೃತಿಕ ಗಣಿಯಾಗಿದೆ.
6.ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳು, ಪ್ರಶಾಂತ ಸಮುದ್ರತೀರಗಳು, ವನ್ಯಜೀವಿ ಧಾಮಗಳು, ವೈಭವೋಪೇತ ಅರಮನೆಗಳು ಮತ್ತು ಕೊಡಗಿನ ಕಾಫೀ ತೋಟಗಳನ್ನುಳ್ಳ ನಮ್ಮ ರಾಜ್ಯವು ವೈವಿಧ್ಯಮಯ ಪ್ರವಾಸೋದ್ಯಮ ಅನುಭವಗಳನ್ನು ನೀಡುತ್ತದೆ.
7. ‘ಬನ್ನಿ, ಕರ್ನಾಟಕವನ್ನು ಶೋಧಿಸಿ- ನಮ್ಮ ಹಂಚಿಕೊಳ್ಳಬಹುದಾದ ಪರಂಪರೆಯನ್ನು ನಾವು ಜೊತೆಯಾಗಿ ಆಚರಿಸೋಣ’ ಎಂದು ನಿಮಗೆಲ್ಲರಿಗೂ ನಾನು ಆಹ್ವಾನ ನೀಡುತ್ತೇನೆ.
8. ಕರ್ನಾಟಕ ಕೇವಲ ಸಾಂಸ್ಕೃತಿಕ ಕೇಂದ್ರವಾಗಿಲ್ಲ: ಬದಲಿಗೆ ಅದೊಂದು ಆರ್ಥಿಕ ಶಕ್ತಿಕೇಂದ್ರ. 337 ಬಿಲಿಯನ್ ಡಾಲರ್ ಜಿಎಸ್ ಡಿಪಿ ಹೊಂದಿರುವ ನಾವು ಭಾರತದ ನಾಲ್ಕನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ್ದು ರಾಷ್ಟ್ರದ ಜಿಡಿಪಿಗೆ ಶೇ 9 ರಷ್ಟು ಕೊಡುಗೆಯನ್ನು ನೀಡುತ್ತಿದೆ.
9. ನಮ್ಮ ರಾಜಧಾನಿ ಬೆಂಗಳೂರು ಜಾಗತಿಕ ಟೆಕ್ ನಾಯಕನಾಗಿದ್ದು, ಪ್ರಪಂಚದಾದ್ಯಂತ ಪ್ರತಿಷ್ಠಿತ 15 ಸ್ಟಾರ್ಟ್ ಅಪ್ ಪರಿಸರವ್ಯವಸ್ಥೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. 18,000 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳಿಗೆ ಬೆಂಗಳೂರು ನೆಲೆಯಾಗಿದ್ದು, 50+ ಯೂನಿಕಾರ್ನ್ಗಳು ಮತ್ತು ಭಾರತದ ಶೇ 40ರಷ್ಟು ಸಾಮರ್ಥ್ಯಾ ಕೇಂದ್ರಗಳು , ಬಾಷ್, ಇಂಟೆಲ್ ಮತ್ತು ಎಸ್ಎಪಿ ಕಂಪನಿಗಳ ಆರ್ & ಡಿ ಕೇಂದ್ರಗಳನ್ನು ಹೊಂದಿದೆ.
10. ನಮ್ಮ ಬಿಯಾಂಡ್ ಬೆಂಗಳೂರು ಯೋಜನೆಯು ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬೆಳವಣಿಗೆಯನ್ನು ಪಸರಿಸುತ್ತಿದ್ದು, ಪ್ರತಿ ಪ್ರದೇಶವೂ ಏಳಿಗೆಯಾಗುವುದನ್ನು ಖಾತ್ರಿಪಡಿಸುತ್ತಿದೆ.
11. ಕರ್ನಾಟಕದ ಯಶಸ್ಸು ಅದರ ಜನ ಹಾಗೂ ನೀತಿಗಳಿಂದಾಗಿ ದೊರೆತಿದೆ. ನಿಪುಣ ಕರ್ನಾಟಕ ಕಾರ್ಯಕ್ರಮಗಳ ಮೂಲಕ ನಾವು ಒಂದು ಲಕ್ಷಕ್ಕೂ ಹೆಚ್ಚು ಯುವಜನರಿಗೆ ಮೈಕ್ರೋಸಾಫ್ಟ್ ಮತ್ತು ಅಕ್ಸೆಂಚರ್ ನಂತಹ ಜಾಗತಿಕ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಎಐ, ಸೈಬರ್ ಸೆಕ್ಯುರಿಟಿ ಮತ್ತು ಜೈವಿಕ ತಂತ್ರಜ್ಞಾನ ಕೌಶಲ್ಯಗಳಲ್ಲಿ ತರಬೇತಿ ನೀಡುತ್ತಿದ್ದೇವೆ.
12. ನಮ್ಮ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ, ಐಐಎಂ , ಬೆಂಗಳೂರು, ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಸಂಸ್ಥೆಗಳನ್ನು ಜ್ಞಾನ ಮತ್ತು ನಾವೀನ್ಯತಾ ಕ್ಷೇತ್ರಗಳಿಗೆ ಅವು ನೀಡಿರುವ ಕೊಡುಗೆಗಳಿಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ.
13. ಎಲೆಕ್ಟ್ರಾನಿಕ್ಸ್, ಆನಿಮೇಷನ್, ಗೇಮಿಂಗ್, ಗ್ರೀನ್ ಹೈಡ್ರೋಜನ್, ಪ್ರವಾಸೋದ್ಯಮ ಮತ್ತು ವಿದ್ಯುತ್ ಚಲನೆಗಳಲ್ಲಿ ಕರ್ನಾಟಕದ ಮುಂದಾಲೋಚನೆಯುಳ್ಳ ನೀತಿಗಳು ಸುಸ್ಥಿರ ಅಭಿವೃದ್ಧಿಗೆ ಸದೃಢ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ.
14. 2017 ರಲ್ಲಿ ಪ್ರಾರಂಭಿಸಲಾದ ಜಾಗತಿಕ ನಾವಿನ್ಯತಾ ಮೈತ್ರಿಯು ಕರ್ನಾಟಕವನ್ನು ವಿಶ್ವದೊಂದಿಗೆ ಬೆಸೆಯುವ ಸಂಪರ್ಕಸೇತುವಾಗಿದೆ. 2018 ರಲ್ಲಿ ವಿಶ್ವದ ಹತ್ತು ದೇಶದೊಂದಿಗಿನ ಮೈತ್ರಿ ಈಗ 35 ದೇಶಗಳಿಗೆ ವಿಸ್ತರಿಸಿದ್ದು, ಜರ್ಮನಿ, ಆಸ್ಟ್ರೇಲಿಯಾ, ಯುಕೆ, ಯುಎಸ್. ಜಪಾನ್, ಇಸ್ರೇಲ್, ಫ್ರಾನ್ಸ್, ಸೌತ್ ಕೊರಿಯಾ, ಫಿನ್ಲ್ಯಾಂಡ್ ಮತ್ತು ಸ್ವಿಟ್ಸರ್ಲ್ಯಾಂಡ್ ದೇಶಗಳು ಮೈತ್ರಿಯಲ್ಲಿವೆ.
15. ಶಿಕ್ಷಣ, ಸಂಶೋಧನೆ, ಸ್ಮಾರ್ಟ್ ಸಿಟಿ, ಶುದ್ಧ ಇಂಧನ, ಪ್ರವಾಸೋದ್ಯಮ ಮತ್ತು ವ್ಯಾಪಾರಗಳಲ್ಲಿ ನಮ್ಮೊಂದಿಗೆ ಸಹಯೋಗ ಬೆಳೆಸಲು ಆಹ್ವಾನಿಸುತ್ತೇವೆ. ನಮ್ಮ ಜನರು ಹಾಗೂ ನಮ್ಮ ವಿಶ್ವಕ್ಕೆ ಲಾಭದಾಯಕವಾಗಿ ಪರಿಣಮಿಸುವ ಪರಿಹಾರಗಳನ್ನು ಒಟ್ಟಾಗಿ ಕಂಡುಕೊಳ್ಳೋಣ.
16. ನಮ್ಮ ವಿದ್ಯುನ್ಮಾನ, ಐಟಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಗಳು ಚಾಲನಾ ಶಕ್ತಿಯಾಗಿದ್ದು, ಕರ್ನಾಟಕವು, ಭಾರತದ ಐಟಿ ಕ್ಷೇತ್ರದ ರಫ್ತಿಗೆ ಸುಮಾರು 64 ಬಿಲಿಯನ್ ಡಾಲರ್ ನಷ್ಟು ಕೊಡುಗೆ ನೀಡಿದೆ.ಇದು ರಾಷ್ಟ್ರದ ಒಟ್ಟು ರಫ್ತಿನ ಮೂರನೇ ಒಂದು ಭಾಗವಾಗಿದೆ.
17. ಎಐ ಕ್ಲಸ್ಟರ್ಸ್, ವಿದ್ಯುನ್ಮಾನ ಪಾರ್ಕ್ ಮತ್ತು ಜೈವಿಕ ನಾವಿನ್ಯತಾ ಹಬ್ ಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಭವಿಷ್ಯದ ಡಿಜಿಟಲ್ ವಿಷಯಗಳಿಗೆ ಸನ್ನದ್ಧವಾಗುವತ್ತ ಕರ್ನಾಟಕವು ದೇಶದಲ್ಲಿಯೇ ಪ್ರಥಮ ರಾಜ್ಯವಾಗಿದ್ದು, ಆನಿಮೇಶನ್, ವಿಶುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರವನ್ನು ಹೊಂದಿದೆ.
18. ಸ್ಟಾರ್ಟ್ ಅಪ್ಸ್, ಜಾಗತಿಕ ಕಂಪನಿಗಳು, ವಿಶ್ವವಿದ್ಯಾಲಯಗಳು ಹಾಗೂ ನೀತಿನಿರೂಪಕರು ಒಟ್ಟಿಗೆ ಕಾರ್ಯನಿರ್ವಹಿಸುವಂತಹ ಪರಿಸರ ವ್ಯವಸ್ಥೆಯನ್ನು ಈ ಪ್ರಯತ್ನಗಳು ರೂಪಿಸಲಿವೆ.
19. 2025 ರ ನವೆಂಬರ್ 18 ರಿಂದ 20 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್ನಲ್ಲಿ ನಮ್ಮ ಈ ಯೋಜನೆಗಳಿಗೆ ಶಕ್ತಿ ತುಂಬಲಿವೆ. ಭವಿಷ್ಯೀಕರಿಸುವ(Futurise) ಎಂಬ ವಿಷಯ ವನ್ನು ಆಧರಿಸಿದ ಸಮಿಟ್ ನಲ್ಲಿ, ಕೃತಕ ವಿಜ್ಞಾನ, ಸೆಮಿಕಂಡಕ್ಟರ್ಸ, ಆರೋಗ್ಯ ಹಾಗೂ ಹವಾಮಾನ ತಂತ್ರಜ್ಞಾನಗಳಲ್ಲಿ ಅನ್ವೇಷಣೆಗಳನ್ನು ಕೈಗೊಳ್ಳಲಾಗುವುದು.
20. ನೋಬೆಲ್ ಪುರಸ್ಕೃತರು, ವಿಶ್ವದ ನಾಯಕರು ಹಾಗೂ ನಾವಿನ್ಯಗಾರರನ್ನು ಬೆಂಗಳೂರು ಟೆಕ್ ಸಮಿಟ್ ಸತ್ಕರಿಸಿದೆ. ಈ ವರ್ಷ ಸಮಿಟ್ ನಲ್ಲಿ ವಿಶ್ವದ 60 ದೇಶಗಳ ಸುಮಾರು 1200 ಪ್ರದರ್ಶಕರು, 600 ಭಾಷಣಕಾರರು ಹಾಗೂ 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ.
21. ಜಾಗತಿಕ ನಾವಿನ್ಯತಾ ಸಹಕಾರವನ್ನು ಆಧರಿಸಿ, ನಿಮ್ಮ ದೇಶಗಳು ನಾವಿನ್ಯತೆಗಳನ್ನು ಪ್ರದರ್ಶಿಸಿ, ವ್ಯಾಪಾರ ಸಭೆಗಳನ್ನು ನಡೆಸಿ, ನಿರ್ವಾಹಕ ಸಭೆಗಳಲ್ಲಿ ಭಾಗವಹಿಸಬಹುದು. ನಿಮ್ಮನ್ನು ನಾವು ಕೇವಲ ಅತಿಥಿಗಳಾಗಿ ಆಹ್ವಾನಿಸದೇ, ಭವಿಷ್ಯ ರೂಪಿಸುವ ನಮ್ಮ ಭಾಗೀಧಾರರಾಗಿ ಆಹ್ವಾನಿಸುತ್ತೇವೆ.
22. ಕರ್ನಾಟಕ ಎಲ್ಲರನ್ನೊಳಗೊಳ್ಳುವ ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿದೆ. ನಮ್ಮ ಹೊಸ ನಾವಿನ್ಯಾತಾ ಜಿಲ್ಲೆಗಳಾದ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಯಲ್ಲಿ ಸಂಶೋಧನೆ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಾಣಲಿವೆ. ಮಂಗಳೂರಿನಲ್ಲಿ ಫಿನ್ ಟೆಕ್ ಯೋಜನೆ ಹಾಗೂ ಹುಬ್ಬಳ್ಳಿ ಧಾರವಾಡದಲ್ಲಿ ಡ್ರೋನ್ ಅಭಿವೃದ್ಧಿ ಯೋಜನೆಗಳು ನಮ್ಮ ಸಮತೋಲಿತ ಬೆಳವಣಿಗೆಯಲ್ಲಿನ ದೂರದೃಷ್ಟಿಯನ್ನು ಬಿಂಬಿಸುತ್ತದೆ.
23. ಕರ್ನಾಟಕ ವಿಶ್ವದೊಂದಿಗಿನ ಪಾಲುದಾರಿಕೆಗೆ ಸಿದ್ದವಾಗಿದೆ. ತಂತ್ರಜ್ಞಾನ, ಪ್ರವಾಸೋದ್ಯಮ ಅಥವಾ ಪ್ರತಿಭೆಯ ಮೂಲಕ ಜಾಗತಿಕ ಸಹಯೋಗವು ಒಟ್ಟು ಯಶಸ್ಸಿಗೆ ರಹದಾರಿಯಾಗಿದೆ.
24. ಬೆಂಗಳೂರು ಟೆಕ್ ಸಮಿಟ್ 2025ಕ್ಕೆ ನಿಮ್ಮೆಲ್ಲರನ್ನೂ ಆಹ್ವಾನಿಸಲು ಎದುರುನೋಡುತ್ತಿದ್ದೇವೆ. ನಾವು ಒಟ್ಟಾಗಿ ಶಾಶ್ವತ ಹಾಗೂ ಪ್ರೇರಣಾದಾಯಕವಾದ ಪಾಲುದಾರಿಕೆಯ ಸೇತುವೆಯನ್ನು ಕಟ್ಟೋಣ.
ಧನ್ಯವಾದಗಳು.
ಜೈ ಹಿಂದ್ , ಜೈ ಕರ್ನಾಟಕ!
Publisher: ಕನ್ನಡ ನಾಡು | Kannada Naadu